*ಭೋಜನ ವಿಧಿಯಲ್ಲಿನ ವೈಜ್ಞಾನಿಕ ತಥ್ಯಗಳು :*
ಮೊದಲಿಗೆ ಬಾಳೆಎಲೆಯ ಮೇಲೆ ಬಡಿಸುವ ಪದ್ಧತಿಯನ್ನು ಅವಲೋಕಿಸೋಣ. ಸಾಂಪ್ರದಾಯಿಕ ಭೋಜನವನ್ನು ಕುಡಿ ಬಾಳೆಲೆಯ ಮೇಲೆ ಬಡಿಸುವ ಪದ್ಧತಿ ರೂಢಿಯಲ್ಲಿದೆ. ಬಡಿಸಿರುವ ಖಾದ್ಯಗಳಲ್ಲಿ ಪ್ರಧಾನ ವ್ಯಂಜನಗಳು ಎಲೆಯ ಬಲಭಾಗದಲ್ಲೂ, ಚಟ್ನಿ, ಉಪ್ಪು, ಉಪ್ಪಿನಕಾಯಿ, ಕೋಸಂಬರಿ, ಹಪ್ಪಳ ಸಂಡಿಗೆಗಳನ್ನು ಎಲೆಯ ಎಡಭಾಗದಲ್ಲಿ ಬಳಸಲಾಗುತ್ತದೆ. ಬಾಳೆಎಲೆಯ ಅಗ್ರ(ಕುಡಿ)ಭಾಗವು ಊಟಮಾಡುವವನ ಎಡಬದಿಗಿರುವಂತೆ ಹಾಕುವ ಪದ್ಧತಿಯಲ್ಲಿ ಊಟ ಮಾಡುವವನ ಅನುಕೂಲವನ್ನು ಪರಿಗಣಿಸಲಾಗಿದೆ. ಬಾಳೆಲೆಯ ಬಲಮೇಲ್ಭಾಗದಲ್ಲಿ ಪ್ರಧಾನ ಖಾದ್ಯಗಳು, ಮಧ್ಯದಲ್ಲಿ ಸಾರು, ಹುಳಿ, ತೊವ್ವೆ ಮುಂತಾದುವುಗಳನ್ನು ಕಲಸಿ ಊಟ ಮಾಡಲು ಅನುಕೂಲವಾಗುವಂತೆ ಅನ್ನಬಡಿಸಲು ಸ್ಥಳಾವಕಾಶ, ಬಲತುದಿಯಲ್ಲಿ ಎಲೆಯ ಸೌಂದರ್ಯವನ್ನು ಹೆಚ್ಚಿಸುವ ಪಾಯಸ, ಎಡ ಬದಿಯಲ್ಲಿ ಪ್ರಧಾನ ಸಿಹಿ ಖಾದ್ಯಗಳನ್ನು ಭೋಜನ ಪ್ರಾರಂಭದಲ್ಲೇ ಬಡಿಸಲಾಗುತ್ತದೆ. ಇದರಿಂದಾಗಿ ಭೋಜನ ಯಾವ್ಯಾವ ಖಾದ್ಯಪದಾರ್ಥಗಳನ್ನು ಒಳಗೊಂಡಿದೆ, ಅದರಲ್ಲಿ ತನಗೆ ಯಾವುದು ಪ್ರಿಯ, ಯಾವುದು ವರ್ಜ ಎಂಬ ಚಿಂತನೆಯೇರ್ಪಟ್ಟು ತನಗೆ ಯಾವುದು ಇಷ್ಟವೋ ಅಷ್ಟನ್ನು ಮಾತ್ರ ಬಡಿಸುವಂತಾಗಿ ಬಡಿಸುವಿಕೆಯಲ್ಲಾಗುವ ಪೋಲನ್ನು ತಡೆಗಟ್ಟುವ ವ್ಯವಸ್ಥೆಯಿದೆ. ಭೋಜನವನ್ನು ಆತುರಪಡದೆ ಪ್ರೀತಿಯಿಂದ ಏಕಮನಸ್ಕನಾಗಿ ತಿನ್ನಬೇಕು. ಭೋಜನ ಕ್ರಿಯೆ ಯಜ್ಞವೆಂದು ಪರಿಗಣಿಸಲ್ಪಟ್ಟದ್ದರಿಂದ ಇಲ್ಲಿ ಮೌನಕ್ಕೆ ಹೆಚ್ಚಿನ ಮಹತ್ವವಿದೆ. ಮಾತಿನಮೂಲಕ ಅಭಿವ್ಯಕ್ತಗೊಳ್ಳಬಹುದಾದ ಸಿಟ್ಟು, ಅಸಹನೆ, ಅಸೂಯೆ, ಪರನಿಂದೆ, ಆತ್ಮರತಿಗಳನ್ನು ಬದಿಗಿಟ್ಟು ಅನ್ನವು ಭಗವಂತನ ಕೃಪೆಯೆಂದು ತಿಳಿದು ಅದನ್ನು ಸ್ವೀಕರಿಸಬೇಕು. ಬುದ್ಧಿಬಲವನ್ನು ಅಪೇಕ್ಷಿಸುವವನು ಸಾತ್ವಿಕ ಆಹಾರವನ್ನು, ದೇಹಬಲವನ್ನು ಹೊಂದಬೇಕಾದವನು ರಾಜಸ ಆಹಾರವನ್ನು ಭುಂಜಿಸಬೇಕು. ಹಳಸಿದ ತಂಗಳು ಮತ್ತು ಜೀರ್ಣಗೊಳ್ಳಲು ಕಷ್ಟವಾದ ಆಹಾರವು ತಾಮಸ ಪ್ರವೃತ್ತಿಯನ್ನು ಬೆಳೆಸುತ್ತದೆ. ಪಾಕಶಾಸ್ತ್ರದ ನಿಯಮಗಳಂತೆ ತಯಾರಿಸಲ್ಪಟ್ಟ ಆಹಾರವನ್ನು ಎಲೆಯ ಮೇಲೆ ವ್ಯವಸ್ಥಿತವಾಗಿ ಬಡಿಸುವುದು ಒಂದು ಕಲೆ. ಅಂತೆಯೇ ಭೋಜನವನ್ನು ಸುಂದರವಾಗಿ ಉಣ್ಣುವುದು ಒಂದು ಕಲೆ. ಭೋಜನಾನಂತರ ತಾಂಬೂಲ ಚರ್ವಣವೂ ಪಚನ ಮತ್ತು ರಸಗ್ರಹಣಕ್ಕೆ ಪೂರಕವಾಗಿ ಧಾತುಪುಷ್ಟಿ ಮತ್ತು ಮೂಳೆಗಳಿಗೆ ಶಕ್ತಿಯನ್ನು ಒದಗಿಸಿ ಬಾಯಿಗೆ ಸುವಾಸನೆಯನ್ನು ನೀಡುತ್ತದೆ. ಭುಜಿಸುವವನ ಅಪೇಕ್ಷೆಯನ್ನು ಗಮನದಲ್ಲಿರಿಸಿಕೊಂಡು ಬಡಿಸುವುದು ಮತ್ತು ತನ್ನ ಅಪೇಕ್ಷೆಯಂತೆ ಬಡಿಸಿದುದೆಲ್ಲವನ್ನು ಸ್ವೀಕರಿಸಿ ಎಲೆಯ ಮೇಲೆ ಬಡಿಸಿದ ಅಡುಗೆಯನ್ನು ಪೋಲು ಮಾಡದಿರುವುದು ಅನ್ನಕ್ಕೆ ನಾವು ನೀಡುವ ಗೌರವವಾಗಿದೆ. ಮನೆಮಂದಿಯೊಂದಿಗೆ ಕುಳಿತು ಉಣ್ಣುವುದು, ಸ್ವಾದಿಷ್ಟವಾದ ಭೋಜವನ್ನು ತಯಾರಿಸಿದ ಗೃಹಿಣಿ (ಅನ್ನಪೂರ್ಣೆ)ಯನ್ನು ಅಭಿನಂದಿಸುವುದನ್ನು ನಾವು ಮರೆಯಬಾರದು. ಹೀಗೆ ಬ್ರಾಹ್ಮಣ ಭೋಜನ ವಿಧಿಯಲ್ಲಿ ಶಾಸ್ತ್ರ, ವಿಜ್ಞಾನಗಳು ಮೇಳೈಸಿ ಅದಕ್ಕೊಂದು ಸುಂದರ ವ್ಯವಸ್ಥಿತ ರೂಪವನ್ನು ಒದಗಿಸಿವೆ.
No comments:
Post a Comment